ಮಾಂಡೂಕ್ಯೋಪನಿಷತ್		- ಮಹತ್ತ್ವದ ಹದಿಮೂರು ಉಪನಿಷತ್ತುಗಳಲ್ಲಿ ಒಂದು ಹಾಗೂ ಕೊನೆಯದು. ಈ ಉಪನಿಷತ್ತಿನಲ್ಲಿ ಅಡಕಗೊಂಡಿರುವ ಮುಖ್ಯ ವಿಷಯಗಳಿವು: 1 ಮನುಷ್ಯ ಪ್ರಜ್ಞೆಯ ಬೇರೆ ಬೇರೆ ದೇವತೆಗಳನ್ನು ಸೂಚಿಸುವುದು. 2 ಆ ಅವಸ್ಥೆಗಳಿಗೆ ಅನುಗುಣವಾಗಿ ಬೇರೆ ಬೇರೆ ದೇವತೆಗಳನ್ನು ಸೂಚಿಸುವುದು. 3 ಓ ಮಂತ್ರದ ಅಕ್ಷರಗಳನ್ನು (ಆ, ಉ, ಮ) ಒಡೆದು ಅವನ್ನು ಬೇರೆ ಬೇರೆ ಅವಸ್ಥೆಗಳಿಗೆ ಹೊಂದಿಸಿ ಹೇಳುವುದು.

1 ಮನುಷ್ಯ ಪ್ರಜ್ಞೆಯ ಬೇರೆ ಬೇರೆ ಅವಸ್ಥೆಗಳು: ಆತ್ಮ ದೇಹವನ್ನು ಸೇರುವಾಗ ಪ್ರಜ್ಞೆಯ ಬೇರೆ ಬೇರೆ ಅವಸ್ಥೆಗಳನ್ನು ದಾಟಿರುತ್ತದೆ. ಅವು ನಾಲ್ಕು. ಜಾಗೃತ, ಸ್ವಪ್ನ, ಸುಷುಪ್ತಿ, ಸಮಾಧಿ.

ಜಾಗೃತ: ಈ ಅವಸ್ಥೆಯಲ್ಲಿ ಆತ್ಮ ಬಾಹ್ಯವಸ್ತುಗಳನ್ನು ಮಾತ್ರ ಅನುಭವಿಸುತ್ತದೆ (ಬಹಿಃಪ್ರಜ್ಞಃ). ಸ್ಥೂಲ ವಸ್ತುಗಳ ಪ್ರಜ್ಞೆ ಅದಕ್ಕಿರುತ್ತದೆ (ಸ್ಥೂಲಭುಕ್).

ಸ್ವಪ್ನ: ಈ ಅವಸ್ಥೆಯಲ್ಲಿ ಆತ್ಮ ಆಂತರಿಕ ಅನುಭವಗಳನ್ನು ಹೊಂದುತ್ತಿರುತ್ತದೆ (ಅಂತಃಪ್ರಜ್ಞಃ). ತನ್ನ ಪೂರ್ವ ಕರ್ಮದ ಸೂಕ್ಷ್ಮ ಭಾವನಾಸಂಸ್ಕಾರವೂ ಅದಕ್ಕಿರುತ್ತದೆ (ಪ್ರವಿವಿಭಕ್ತಭುಕ್).

ಸುಷುಪ್ತಿ: ಗಾಢವಾದ ನಿದ್ರಾವಸ್ಥೆ. ಯಾವುದೇ ಆಶೆ. ಕಾಮನೆಗಳ ತೊಂದರೆಯಿರುವುದಿಲ್ಲ. ಯಾವ ಕನಸುಗಳೂ ಇಲ್ಲ. ಇಲ್ಲಿ ಆತ್ಮ ತನ್ನಲ್ಲಿ ತಾನು ಲೀನವಾಗಿರುತ್ತದೆ (ಏಕೀಭೂತಃ), ಪ್ರಜ್ಞಾನ ಘನವಾಗಿ ಆನಂದಮಯವಾಗಿರುತ್ತದೆ. ಆನಂದವನ್ನೇ ಅನುಭವಿಸುತ್ತಿರುತ್ತದೆ.

ಸಮಾಧಿ: ಆತ್ಮದ ನಾಲ್ಕನೆಯ ಅವಸ್ಥೆ. ಶುದ್ಧ, ಸ್ವಚೈತನ್ಯ. ಇಲ್ಲಿ ಆಂತರಿಕ ವಸ್ತುಗಳ ಅಥವಾ ಬಾಹ್ಯ ವಸ್ತುಗಳ ಅಥವಾ ಅವೆರಡೂ ಕೂಡಿದ ವಸ್ತುಗಳ ಜ್ಞಾನವಿರುವುದಿಲ್ಲ. ಪ್ರಜ್ಞೆ ಮತ್ತು ಅಪ್ರಜ್ಞೆ ಎರಡನ್ನೂ ಮೀರಿದ ಸ್ಥಿತಿಯಲ್ಲಿರುತ್ತದೆ. ಅದು ಪ್ರಜ್ಞಾನ ಘನವೂ ಅಲ್ಲ (ನಾಂತಃ ಪ್ರಜ್ಞಂ, ನ ಬಹೀ ಪ್ರಜ್ಞಂ ನೊಭಯತಃ ಪ್ರಜ್ಞಂ ನ ಪ್ರಜ್ಞಾನಘನಂ ನ ಪ್ರಜ್ಞಂ ನಾ ಪ್ರಜ್ಞಂ).
2 ದೇವತಾ ಸೂಚನೆ : ಜಾಗೃತ ಅವಸ್ಥೆಯ ಅಧಿಷ್ಠಾನದೇವತೆ ವೈಶ್ವಾನರ. ಆಕಾಶವೇ ಆತನ ತಲೆ, ಸೂರ್ಯನೇ ಕಣ್ಣು, ಹವೆ ಉಸಿರು, ಬೆಂಕಿ ಹೃದಯ, ನೀರು ಹೊಟ್ಟೆ, ಪೃಥ್ವಿ ಪಾದಗಳು ಮತ್ತು ದೇಶ ಶರೀರ. ಆತನ ಜ್ಞಾನ ಸಾಧನಗಳು. ಹತ್ತೊಂಬತ್ತು: ಪಂಚ ಜ್ಞಾನೇಂದ್ರಿಯಗಳು. ಪಂಚ ಕರ್ಮೇದ್ರಿಯಗಳು, ಉಸಿರಿನ ಪಂಚಕ್ರಿಯೆಗಳು. ಮನಸ್ಸು, ಬುದ್ಧಿ, ಹೃದಯ ಮತ್ತು ಅಹಂಕಾರ. ಇಂದ್ರಿಯ ಸುಖಗಳನ್ನು ಈತ ಅನುಭವಿಸುವವ. ಸ್ವಪ್ನಾವಸ್ಥೆಯ ಅಧಿಷ್ಠಾನ ದೇವತೆ ತೈಜಪ. ಈತನಿಗೆ ಸಪ್ತ ಅಂಗಗಳು ಮತ್ತು ಹಂತ್ತೊಂಬತ್ತು ಜ್ಞಾನ ಸಾಧನಗಳು. ಸುಷುಪ್ತಿಯ ದೇವತೆ ಪ್ರಾಜ್ಞ. ಆತ ವಿಶ್ವಪುರುಷ. ಸರ್ವರ ದೊರೆ. ಸರ್ವ ವಸ್ತುಗಳ ಜ್ಞಾನ ಆತನಿಗಿದೆ. ಆತ ಸರ್ವ ಹೃದಯಗಳ ಅಂತರಾತ್ಮ. ಸರ್ವಮೂಲ, ಸರ್ವರ ಗುರಿಯೂ ಅವನೇ. ವೈಯಕ್ತಿಕವಾಗಿ ಆತನನ್ನು ಈಶ್ವರ ಅಥವಾ ದೇವರು ಎಂದೂ ಕರೆಯಲಾಗಿದೆ. ಸಮಾಧಿಯ ದೇವತೆ ಆತ್ಮ ಅಥವಾ ಬ್ರಹ್ಮ. ಆತ ಅಗೋಚರ. ಅವ್ಯವಹಾರ್ಯ, ಅಗ್ರಾಹ್ಯ, ಅಲಕ್ಷಣ, ಅಚಿಂತ್ಯ, ಅವ್ಯಪದೇಶ್ಯ, ಸ್ವಾನುಭೂತಿಯಸಾರ, ಪ್ರಪಂಚೋಪಶಮ, ಶಾಂತ, ಶಿವ ಮತ್ತು ಅದ್ವೈತ.

3 ಓಂ ಮಂತ್ರದ ಅಕ್ಷರಗಳು: ಆತ್ಮ ಅಥವಾ ಬ್ರಹ್ಮ ಓಂಕಾರ ಸಂಕೇತ. ಓಂ-ಅವಿಭಾಜ್ಯವಾದರೂ ಅದು ಮೂರು ಅಕ್ಷರಗಳನ್ನು- ಅ, ಉ, ಮ - ಒಳಗೊಂಡಿದೆ. ಆ ಅಕ್ಷರ ಜಾಗೃತಾವಸ್ಥೆಗೂ ವೈಶ್ವಾನರ ದೇವತೆಗಳೂ ಹೊಂದಿಕೊಂಡಿದೆ. ಉ ಸ್ವಪ್ನಾವಸ್ಥೆಗೂ ತೈಜಪ ದೇವತೆಗೂ ಹೊಂದಿಕೊಂಡಿದೆ. ಮ ಸುಷುಪ್ತಿಗೂ ಪ್ರಾಜ್ಞನಿಗೂ ಅನ್ವಯಿಸುತ್ತದೆ. ಸಮಾಧಿ-ಅವಸ್ಥೆಗೆ ಅನ್ವಯಿಸುವ ಆತ್ಮ ಅಥವಾ ಬ್ರಹ್ಮ ಓ ಆಗಿದೆ.						 	
(ಕೆಯುಜಿಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ